ಕೆಡುಕು ಮಾಡುವ ಹಲವಾರು ಕಾರಕಗಳು ಸೇರಿರುವ ಆಹಾರದ ಸೇವನೆಯಿಂದ ರೋಗ ಬರಬಹುದು. ಸಾಮಾನ್ಯ ರಾಸಾಯನಿಕ ವಿಷಗಳು, ವಿಷದ ಗಿಡಮರಗಳು, ಪ್ರಾಣಿಗಳು, ಹಲವು ಗೊತ್ತಾದ ಪ್ರಾಣಿ ಪರಪಿಂಡಿಗಳು, ಜೀವಾಣುಗಳು ಇಂಥವು (ನೋಡಿ- ಪರಪಿಂಡಿಶಾಸ್ತ್ರ), ಇಷ್ಟಾದರೂ ಆಹಾರ ವಿಷವೇರಿಕೆಯ ಬಹುವಾಗಿ ಕಾರಣವಾದವು ಸೂಕ್ಷ್ಮ ಜೀವಿಗಳು, ಅದರಲ್ಲೂ ಬ್ಯಾಕ್ಟೀರಿಯಗಳು, ಅಲ್ಲದೆ ಅವು ಬಿಡುವ ವಿಷಗಳು. ಗುತ್ತಿಕಾಯ್ಜೀವಿಗಳು (ಸ್ಟೆಫೈಲೊಕಾಕೈ), ಊರುಬಾಡು ಕದಿರುಜೀವಿಗಳು (ಕ್ಲಾಸ್ಟ್ರಿಡಿಯಂ ಬಾಟುಲೈನಂ) ತೆರನ ಬ್ಯಾಕ್ಟೀರಿಯಗಳಿಂದ ಬಂದ ಜೀವಿವಿಷಗಳೇ (ಟಾಕ್ಸಿನ್ಸ್) ಬೇರೆ ನಿಜವಾದ ಏಕಾಣುಜೀವಿಕ ಆಹಾರ ವಿಷವೇರಿಕೆ, ಸಾಲೆಮನ್ ಜೀವಿಗಳು (ಸಾಲ್ಮೊನೆಲ್ಲ), ಷೀಗಜೀವಿಗಳು (ಷಿಗೆಲ್ಲ) ಸರಕಾಯ್ಜೀವಿಗಳಂಥವಿಂದ (ಸ್ಟ್ರೆಪ್ಟೋಕಾಕೈ) ಬಂದ ಜೀವವಿಷಗಳೇ ಬೇರೆ ಎಂದು ಪರಿಗಣಿಸುವುದುಂಟು (ಎರಡನೆಯ ತಂಡದವೇ ಆಹಾರದ ಸೋಂಕುಗಳು).
ಹಳಸಿದ್ದರೆ, ಸೂಕ್ಷ್ಮಜೀವಿಗಳಿಂದ ಕೊಳೆತರೆ, ಆಹಾರ ವಿಷವೇರುವುದೆಂಬ ನಂಬಿಕೆ ಬಲವಾಗಿದ್ದರೂ ತಿನ್ನಲು ರುಚಿಗೆಟ್ಟಿದ್ದರೂ ಹೊಲಸಾಗಿ ಕಂಡರೂ ಕೆಟ್ಟನಾತ ಬಡಿಯುತ್ತಿದ್ದರೂ ಅಂಥ ಆಹಾರ ಯಾವಾಗಲೂ ವಿಷಕರವೆಂದು ಹೇಳಲುಬಾರದು. ಹಾಗೆ ನೋಡಿದರೆ ಹಳಸಲು, ಕೊಳೆತಗಳನ್ನು ಒಂದು ಮಟ್ಟಕ್ಕೆ ಮಿತಿಗೊಳಿಸುವುದರಿಂದ ಮಾತ್ರವೇ ಚೀಸು, ಕೋಸುಮದ್ಯಗಳ (ಸಾವರ್ ಕ್ವಾಚ್) ತಯಾರಿಕೆ, ಮಾಂಸ ಮಾಗುವಿಕೆ ಸಾಧ್ಯ. ಅದೇ ತೆರನಾಗಿ, ಬಾಯಲ್ಲಿ ನೀರೂರಿಸುವ ತಿನ್ನಲು ರುಚಿಯಾಗಿರುವ ತಿಂಡಿ ತಿನಿಸುಗಳಲ್ಲೇ ಕೆಡುಕುಕಾರಕ ಬ್ಯಾಕ್ಟೀರಿಯ ಅವುಗಳಿಂದೇಳುವ ವಿಷಗಳೂ ಬೇಕಾದಷ್ಟಿರಬಹುದು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ